Sunday, May 10, 2015

ಅಮ್ಮ ನಿನ್ನ ತೋಳಿಗೆ...!



     ಈ ಜೀವನದ ಜೋಳಿಗೆಗೆ ಹೋಳಿಗೆಯನ್ನಿಟ್ಟು, ಆ ಸಿಹಿಯ ಸವಿಯಲ್ಲಿಯೇ ತೇಗುಂಡು, ಕೈತುತ್ತು’ ಪದಕ್ಕೆ ‘ಅರ್ಥ’ಳಾಗಿ, ಅಂಬೆಗಾಲಿನ ಒಯ್ಯಾರಕ್ಕೇ ಹಾತೋರೆದು ಬೆರಗಾಗಿ, ತೋಳಿನ ಓರೆಯಲ್ಲಿ ಮಲಗಿದ್ದ ಸಿಹಿ ನಿದ್ದೆಯ ನೆನಪುಗಳ ಕಂತಿಗೆ ಮುನ್ನುಡಿ ಬರೆದು, ನಾಲಿಗೆ ಜಾರಿದ ತೊದಲುಗಳಿಗೆ ನಯವಾಗಿ ಕಿವಿ ಹಿಂಡುತ್ತಾ ಬದುಕಿಗೆ ದೀವಿಗೆಯಾದ ತ್ಯಾಗಮಯೀ  ನಮ್ಮಮ್ಮನಲ್ಲಿ ಈ ದಿನ ಹಂಬಲಿಸುತಿರುವೆ ಮತ್ತೇ ನಿನ್ನ ತೋಳಿಗೆ..!



    ಒಬ್ಬಟ್ಟಿನ ದಾಹಕ್ಕೆ ಒಂಬತ್ತರ ಕಹಿಯುಂಡ ನಮ್ಮಮ್ಮನಿಗೆ ಏನಾದರು ಕೊಡುವ ಹಂಬಲ ಈ “ತಾಯಂದಿರ ದಿನಾಚರಣೆ”ಗೆ, ಅರಿವಿನ ಬತ್ತಳಿಕೆಯ ಗೊಂದಲದ ನಡುವೆಯೂ ಬಿಡದ ಕನಸಿಗೆ  ಬೆನ್ನೆಳುಬುಗಳಾಗಿ ನಿಂತು ನನಸಿನ ಹಾದಿ ತೋರಿದವರು ನನ್ನವರು. 3 ದಿನದ ಘಳಿಗೆ ಹೊತ್ತು ತಯಾರಿಯಾ ಗೌಜಿನಲ್ಲಿ ವಿಭಿನ್ನತೆಯ ನಾಂದಿಗೆ  ತಾಳಹಾಕುತ್ತಾ, ಹಲವು ಚರ್ಚೆ,ತರ್ಕಗಳ ನಂತರ  ಕುಂಚ ಹಿಡಿದವರಿಗೆ “ಅಮ್ಮನ ಪ್ರೀತಿ”, “ಕಾಲೇಜಿನ ವಿಭಿನ್ನ ನೋಟ” ಛಾಯಾಗ್ರಹಣದ ವಸ್ತುವನ್ನಾಗಿ ಮುಂದಿಟ್ಟುಕೊಂಡು ಸ್ಪರ್ಧೆಗೆ ಕರೆ ಕೊಟ್ಟಿತು. ವಿದ್ಯಾರ್ಥಿಗಳಿಗೆ ಸೂಚಿಸುವ ನಿಟ್ಟಿನಲ್ಲಿ ಎಲ್ಲಾ ತರಗತಿಯ ಮೆಟ್ಟಿಲು ಹತ್ತಿದ ನಮ್ಮವರಲ್ಲಿ ಸಂತಸದ ಜಿನುಗು ಹರಿಯುತಿತ್ತು. ಕಾಲೇಜಿನ ಪ್ರಾಂಶುಪಾಲರ ಅನುಮತಿ ಮೇರೆಗೆ, ಶಿಕ್ಷಕ ಬಂಧುಗಳಿಗೆ ಆಹ್ವಾನ ನೀಡುವಷ್ಟರಲ್ಲಿ ಪಡುವಣ ದಿಕ್ಕಿನಲ್ಲಿ ಸೂರ್ಯ ಮರೆಯಾಗ ಹೊರಟಿದ್ದ.
      ಅಂದು ಏಪ್ರಿಲ್ 24 ಶುಕ್ರವಾರ’ದ ಮುಂಜಾನೆಯಿಂದಲೂ ಹುಳಬಿಟ್ಟಂತ್ತಿದ್ದ  ಎಲ್ಲರ ತವಕದ ಚಿತ್ತಕ್ಕೇ ತಿಂಡಿ-ಕಾಫೀಗಳ ಪರಿಯೇ ಇಲ್ಲ, ತರಗತಿಯಲ್ಲಿ ದೇಹ ಮಾತ್ರ ಕುಳಿತಿದ್ದರೆ, ಮನಸ್ಸು ಮಾತ್ರಾ ಕಾರ್ಯಕ್ರಮದ ಚಿತ್ತಾರದಲ್ಲಿ ಮೂಳುಗಿತ್ತು. ಅಪರಾಹ್ನದ ಜೋಂಕು ಮಳೆಗೆ ಒಮ್ಮೆಲೇ ನಮ್ಮ ಹೃದಯ ನಿಂತಂತಾದರು, ಚಿತ್ತದಲ್ಲಿ ಅರಳಿದ ಹೊಸ ಚಿಂತನ ಲಹರಿ ಮತ್ತೆ ನನ್ನ ಬಡಿದೆಚ್ಚರಿಸಿತು. ಮಳೆಯ ಆಡಚಣೆಯಿಂದ ಕಾರ್ಯಕ್ರಮದ ಸ್ಥಳಗಳು ಸ್ವಲ್ಪ ಬದಲಾವಣೆ ಹೊಂದಿದವು ಅಷ್ಟೇ. ಅಂತು ನಿಗದಿಪಡಿಸಿದ ವೇಳೆ ಕೈಗೆ ಸಿಕ್ಕುವಲ್ಲಿ ನಮ್ಮೆಲ್ಲರ ಎದೆಬಡಿತ  ಜೋರಾದಂತಿತ್ತು. ಹಸಿರ ಹರಿದ್ರಾಣಿಯಲ್ಲಿ ಎಲ್ಲ ಇಂಜಿನಿಯರಿಂಗ್ ವಿದ್ಯಾರ್ಥಿಸಮೂಹ ನೆರೆದಂತೆ ಗದ್ದಲ ಮುಗಿಲೆರಿದಂತೆ ಭಾಸ.
      ಅಷ್ಟರಲ್ಲಿ ಹಸಿರಿನ ನಡುವೆ ಓದಿನ ಜೊತೆ ಸೇವೆಯನ್ನು ಗುರಿಯಾಗಿಸಿಕೊಂಡ “ರೆಮೋಸ್-ಚಿಕ್ಕಮಗಳೂರು” ವಿದ್ಯಾರ್ಥಿ ಬಳಗದ ಹೆಸರಿನ ಜೊತೆ “ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ,ಚಿಕ್ಕಮಗಳೂರು” ಎಂಬ ಹೆಸರಿನಿಂದ ಚಿತ್ತಾರಗೊಂಡ  “ಕಾರ್ಯಕ್ರಮದ ಹಲಗೆ ” ಎಲ್ಲರ ದೃಷ್ಟಿಗೂ
ನಾಕುವಂತಿತ್ತು. ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಕೆ.ಸುಬ್ಬರಾಯ ರವರು ಮಕ್ಕಳಂತೆ ನಮ್ಮೊಂದಿಗೆ ಕೂಡಿ, ಅವರ ಬಾಲ್ಯ ನೆನಪಿಸುತ್ತಾ ಕುಂಚ ಹಿಡಿದು ಉರಿಯುವ ಜ್ಯೋತಿಯನ್ನು  ಸಾಂಕೇತಿಕವಾಗಿ ಬಿಡಿಸುವುದರೊಂದಿಗೆ ಉದ್ಘಾಟಿಸಿ, ಸ್ಪರ್ಧಾಳುಗಳಿಗೆ ಶುಭಕಾಮನೆಯನ್ನು ತಿಳಿಸಿದರು. ಅಮ್ಮನ ಪ್ರೀತಿಯ ಸವಿನೆನಪುಗಳಿಗೆ  ಕುಂಚದಿಂದ ಬಣ್ಣಹಚ್ಚುವ ಕಾಯಕದಲ್ಲಿ ಮೂಳುಗಿದ ಗುಂಪು ಒಂದೆಡೆಯಾದರೆ, ಕ್ಯಾಮರ ಕಣ್ಣಿಂದ ತನ್ನ ಕಾಲೇಜನ್ನು ವಿಭಿನ್ನ ರೀತಿಯಲ್ಲಿ ತೋರಿಸುವ ಕಲ್ಪನೆಯಲ್ಲಿದ್ದ ವಿದ್ಯಾರ್ಥಿಗಳ  ಸಮೂಹ ತನ್ನದೇಯಾದ ಲೋಕದಲ್ಲಿ ಬೆರೆತು ಅರ್ಥಪೂರ್ಣ ದಿನಾಚರಣೆಗೆ ನಾಂದಿಬರೆದರು.
    ತಾಯಿಯ ಸೇವೆಗೆ ನಮ್ಮದು ಪಾಲಿರಲಿ ಎಂದು ತುಂಬು ಮನಸಿನಿಂದ
ಕಾರ್ಯಕ್ರಮದ ಹಾಗು ಬಹುಮಾನದ ಪ್ರಾಯೋಜಕತ್ವವನ್ನು ವಿದ್ಯಾರ್ಥಿ ಸಹಾಯೀ “ISRASE ಮತ್ತು ಕಾಫೀ ನಾಡಿನ ಚಿಲುಮೆ “ನಮ್ಮ ಚಿಕ್ಕಮಗಳೂರು” ಸಂಸ್ಥೆಗಳು ನಿಭಾಯಿಸಿ ತಾಯೀಯ ಪ್ರೀತಿಗೆ  ಸಣ್ಣ ಕಾಣಿಕೆ ಕೊಟ್ಟು ತಮ್ಮ ಋಣವನ್ನು ಇಳಿಸಿಕೊಂಡರು.  ಕಾರ್ಯಕ್ರಮದಲ್ಲಿ “ರೆಮೋಸ್-ಚಿಕ್ಕಮಗಳೂರು” ಸಮಾಜಸ್ನೇಹಿ ವಿದ್ಯಾರ್ಥಿ ಬಳಗದ  ಸರ್ವ ಸದಸ್ಯರು, ಕಾಲೇಜಿನ ಎಲ್ಲ ಪ್ರಾಚಾರ್ಯರು, ಪ್ರಾಯೋಜಕರು, ಎಲ್ಲಾ ನನ್ನ ಕಾಲೇಜಿನ ಗೆಳೆಯ, ಗೆಳತಿಯರು ಈ ಅರ್ಥಪೂರ್ಣ  ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು. ತಾಯೀಯ ಅದ್ಭುತ ಕಲ್ಪನೆಯಾ ಚಿತ್ರಸಮೂಹದ ಕರ್ತರಿಗೆ  ಕೈಮುಗಿಯುತ್ತಾ, ಅಂತಿಮ ಘಟ್ಟದ ಪಲಿತಾಂಶವನ್ನು ಮೇ 1 ರಂದು ನಡೆದ
“ಚುಂಚನ” ಕಾಲೇಜಿನ ಸಾಂಸ್ಕ್ರತಿಕ ಉತ್ಸವದ  ಮೆರಗಿನಲ್ಲಿ  ಕಾಲೇಜಿನ ಪ್ರಾಂಶುಪಾಲರು ವಿಜೇತರಿಗೆ  ಬಹುಮಾನ ನೀಡಿ ಗೌರವಿಸಿದರು.


  ಮೇ 10 ರ  “ತಾಯಂದಿರ ದಿನಾಚರಣೆ”ಯ ಹಿನ್ನಲೆಯಲ್ಲಿ ನನ್ನ ಸಮೂಹದಿಂದ 

ಮೂಡಿಬಂದ ಈ ಚಿತ್ತವೃತ್ತಿಯನ್ನು ಅಂಬರದ ಚಂದಮಾಮ  ತೋರಿಸುತ್ತಾ 

ಕೈತುತ್ತು ನೀಡಿ, ನನ್ನೆಲ್ಲಾ ಚೇಷ್ಟೆಯಸಹಿಸಿ, ಹಟಕ್ಕೆ ಮಣಿದ ಪ್ರೀತಿಯ ನಮ್ಮ 

ಅಮ್ಮನಿಗೆ ಈ ನನ್ನ ಚಿಕ್ಕ ಕಾಣಿಕೆ.

Saturday, May 2, 2015

ತಾಯಂದಿರ ದಿನಾಚರಣೆಗೆ ಎಐಟಿಯಲ್ಲಿ “ರೆಮೋಸ್-ಚಿಕ್ಕಮಗಳೂರು”

     ಓದಿನ ಜೊತೆ ಸೇವೆಯನ್ನು ಗುರಿಯಾಗಿಸಿಕೊಂಡು ಚಿಕ್ಕಮಗಳೂರು ಜಿಲ್ಲೆಯ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡ “ರೆಮೋಸ್-ಚಿಕ್ಕಮಗಳೂರು” ವಿದ್ಯಾರ್ಥಿ ಬಳಗವು ಮೇ 10ರ “ಅಮ್ಮಂದಿರ ದಿನಾಚರಣೆಯ” ಹಿನ್ನಲೆಯಲ್ಲಿ ಪ್ರಥಮ ಬಾರಿಗೆ  ತಮ್ಮ ಕಾಲೇಜು, ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಚಿತ್ರಕಲೆ ಮತ್ತು ಛಾಯಾಗ್ರಹಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
      ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಕೆ.ಸುಬ್ಬರಾಯ ರವರು ಕುಂಚ ಹಿಡಿದು ಉರಿಯುವ ಜ್ಯೋತಿಯನ್ನು  ಸಾಂಕೇತಿಕವಾಗಿ ಬಿಡಿಸಿ ಉದ್ಘಾಟಿಸಿ, ನಂತರ ಮಾತಾನಾಡಿ  ತಾಯೀ ಪ್ರತ್ಯಕ್ಷ ದೇವತೆ, ತ್ಯಾಗದ ಗಂಧಕುಸುಮ. ಪ್ರೀತಿ, ಮಮತೆಯ  ಒಡಲು.  ಆ ಮಾತೆಯನ್ನು ಗೌರವಿಸುವುದು, ಆರಾಧಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿ, ಸ್ಪರ್ಧಾಳುಗಳಿಗೆ ಶುಭಕಾಮನೆಯನ್ನು ತಿಳಿಸಿದರು.
    “ತಾಯಿಯ ಮಮತೆ” ಎಂಬ ವಿಷಯದ ಕುರಿತು ಚಿತ್ರಕಲೆಯು, “ವಿಭಿನ್ನ ನೋಟದಲ್ಲಿ  ಕಾಲೇಜು” ಎಂಬುದು ಛಾಯಾಗ್ರಹಣದ ವಿಷಯ. ಅಮ್ಮನ ಪ್ರೀತಿಯ ಸವಿನೆನಪುಗಳಿಗೆ  ಕುಂಚದಿಂದ ಬಣ್ಣಹಚ್ಚುವ ಕಾಯಕದಲ್ಲಿ ಮೂಳುಗಿದ ಗುಂಪು ಒಂದೆಡೆಯಾದರೆ, ಕ್ಯಾಮರ ಕಣ್ಣಿಂದ ತನ್ನ ಕಾಲೇಜನ್ನು ವಿಭಿನ್ನ ರೀತಿಯಲ್ಲಿ ತೋರಿಸುವ ಕಲ್ಪನೆಯಲ್ಲಿದ್ದ ವಿದ್ಯಾರ್ಥಿಗಳ  ಸಮೂಹ ಇನ್ನೊಂದೆಡೆ ತನ್ನದೇಯಾದ ಲೋಕದಲ್ಲಿ ಬೆರೆತು,ಅರ್ಥಪೂರ್ಣ ದಿನಾಚರಣೆಗೆ ನಾಂದಿಬರೆದರು.



 ಸ್ಪರ್ಧೆಯಲ್ಲಿ  ವಿಜೇತರಿಗೆ  ಎಐಟಿ ಕಾಲೆಜಿನ “ಚುಂಚನ” ಕಾರ್ಯಕ್ರಮದಲ್ಲಿ ಬಹುಮಾನ  ನೀಡಲಾಯಿತು. ಬಹುಮಾನ ಮತ್ತು ಕಾರ್ಯಕ್ರಮದ ಪ್ರಾಯೋಜಕತ್ವವನ್ನು ISRASE ಮತ್ತು “ನಮ್ಮ ಚಿಕ್ಕಮಗಳೂರು” ಸಂಸ್ಥೆಗಳು ನಿಭಾಯಿಸಿದವು. ಕಾರ್ಯಕ್ರಮದಲ್ಲಿ “ರೆಮೋಸ್-ಚಿಕ್ಕಮಗಳೂರು” ಸಮಾಜಸ್ನೇಹಿ ವಿದ್ಯಾರ್ಥಿ ಬಳಗದ  ಸರ್ವ ಸದಸ್ಯರು, ಕಾಲೇಜಿನ ಎಲ್ಲ ಪ್ರಾಚಾರ್ಯರು, ಪ್ರಾಯೋಜಕರು ಈ ಅರ್ಥಪೂರ್ಣ  ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.
   " ಹೆಮ್ಮೆಯ   ಪ್ರಾಯೋಜಕರು"
      

Tuesday, April 7, 2015

ಸೀತಳಯ್ಯನಗಿರಿಯಲ್ಲಿ “ಪ್ಲಾಸ್ಟಿಕ್ ಹಟಾವೋ ಆಂದೋಲನ”ಕ್ಕೆ ಹಸಿರು ನಿಶಾನೆ


ಹುಚ್ಚೆದ್ದು ಹಸಿಗೊಂಡು, ರುದ್ರತಾಂಡವಕ್ಕೆಬೆನ್ನೆಲುಬು
ಗಳಾದ ವಿಕ್ರತ ಮನೋಭಾವಿ ಸ್ನೇಹಿತರೇ,

                               ಪರಿಸರ ನಿಮ್ಮ  ಪಿತ್ರಾರ್ಜಿತ ಸ್ವತ್ತಲ್ಲ. ನಮಗೂ ಬಾಳಲು ಬಿಡಿ. ಬದುಕಲು ಅವಕಾಶ ನೀಡಿ...


      “ರೆಮೋಸ್ ಚಿಕ್ಕಮಗಳೂರು ಮತ್ತು “ಮೈಟೋಸಿಸ್”(Mytosys)  ಸಂಸ್ಥೆಗಳ  ಜಂಟಿ ನೇತ್ರತ್ವದಲ್ಲಿ ಚಿಕ್ಕಮಗಳೂರಿನ ಪ್ರಸಿದ್ದ ಪ್ರೇಕ್ಷಣೀಯ ಸ್ಥಳ ಸೀತಳಯ್ಯನಗಿರಿಯಲ್ಲಿ, ಗಿರಿಯನ್ನು ಆಕ್ರಮಿಸಿದ ಪ್ಲಾಸ್ಟಿಕ್ ,ಬಾಟಲಿ ಇನ್ನಿತರ ಕಸಗಳನ್ನು  ಸ್ವಚ್ಛಗೊಳಿಸಿ, ಪರಿಸರವನ್ನು ಉಚಿತಪಡಿಸಿ, ಪ್ರವಾಸಿಗರಿಗೆ ಸಮಯೋಚಿತ ಜಾಗ್ರತಿಮೂಡಿಸಿ,  ಸ್ವಚ್ಛ ಭಾರತ ಅಭಿಯಾನಕ್ಕೆ ಮುನ್ನುಡಿ ಬರೆದ ಚಿಕ್ಕಮಗಳೂರಿನ ಯುವ ಸಮಾಜಸ್ನೇಹಿ ಬಳಗ.        

 ಪರಿಸರದ ಸೌಂದರ್ಯ ಹಾಳುಮಾಡುವುದು ಸುಲಭ, ಮತ್ತೆ ಶುಭ್ರತೆಯ ಹಾದಿಗೆ ತರುವುದು ತಾಳ್ಮೆಯ ಮಾತಲ್ಲ, ನೀವು ತಂದ ಕಸಕ್ಕೆ ನೀವೇ ಜವಾಬ್ದಾರಿವಹಿಸಿ, ಅದರ ವಿಲೇವಾರಿ ಕ್ರಮಗೊಂಡು. ಭವಿಷ್ಯದಲ್ಲಿ
ಬರುವ ಸಹಸ್ರಾರು ಪ್ರವಾಸಿಗರಿಗೆ ಈ  ಪ್ರೇಕ್ಷಣೀಯ ಸ್ಥಳದ ಸೊಬಗನ್ನು ನೋಡುವ ಭಾಗ್ಯ ಕಲ್ಪಿಸಿ ಎಂದು ಶ್ರಮದಾನದ ಕೈಂಕರ್ಯಕ್ಕೆ ಚಾಲನೆ ನೀಡಿದ ಶ್ರೀಯುತ ವಿವೇಕಾನಂದ ಸರ್  ಹಾಗು ಶ್ರೀಯುತ ಸಂತೋಷ್ ಕುಮಾರ್ ಸರ್ ರವರು ಜನರಲ್ಲಿ ಕಳಕಳಿಯಿಂದ  ವಿನಂತಿಸಿಕೊಂಡರು.
        

           ಕಾರ್ಯಕ್ರಮದಲ್ಲಿ  “ಮೈಟೋಸಿಸ್”(Mytosys)ನ ಸಂಸ್ಥಾಪಕರಾದ ಶ್ರೀನಿಧಿ ಭಟ್ ಮತ್ತು ಪ್ರಜ್ವಲ್ ಎಂ.ಆರ್ ಹಾಗು “ರೆಮೋಸ್ ಚಿಕ್ಕಮಗಳೂರು” ವಿದ್ಯಾರ್ಥಿ ಬಳಗದ ಸಂಸ್ಥಾಪಕ ನಿತೀಶ್ ಮಯ್ಯ  ಮತ್ತು  ಬಳಗದ ಸದಸ್ಯರು ಪ್ರಜ್ವಲ್ ಎಸ್.ವಿ, ಪೂರ್ಣಚಂದ್ರ, ಪ್ರವೀಣ್ ಹೆಚ್.ಟಿ, ಪ್ರಜ್ವಲ್ ಸಿ.ಆರ್, ದರ್ಶನ್  ಹಾಗು ಅವಿನಾಶ್ ರಾವ್, ಸಿ.ಎ ವಿದ್ಯಾರ್ಥಿ ಗಿರಿಯಲ್ಲಿನ ಪ್ಲಾಸ್ಟಿಕ್ ವಿಲೇವಾರಿಗೆ ಸಕ್ರಿಯವಾಗಿ ಭಾಗವಹಿಸಿ ಚಿಕ್ಕಮಗಳೂರಿನ ಸ್ವಚ್ಛ ಭಾರತ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು.


Sunday, February 22, 2015

ಹಣದುಬ್ಬರ

ಮಾನವನ ಜೀವನ ಮುಳುಗಿದೆ ಹಣದ ಭರದಲ್ಲಿ
ಹಣ ತುಂಬಿ ತುಳುಕುತ್ತಿದೆ ಸಾಗರದ ರಭಸದಲ್ಲಿ
ಸಿರಿವಂತರ ಹಣದ ಬಳಕೆಯ ರೀತಿ
ಇದು ಬಡವರ ಪಾಲಿಗೆ ಬಾಳಿನ ಭೀತಿ
ಹಣವಿದ್ದರೆ ಆಗುವನು ಸಕಲ ಭಾಗ್ಯ ಸತ್ಪಾತ್ರ
ಇಲ್ಲದಿದ್ದರೆ ಹಿಡಿಯುವನು ಚಿಂತೆಯೆಂಬ ದುರ್ಭಗ್ಯದ ಪಾತ್ರ
ವಸ್ತುಗಳ ಬೆಲೆ ಏರಿಕೆ ಹಾರಡುತಿದೆ ಬಾನಾಡಿನಲಿ             
ಬಿಸಿ ಏರುತಿದೆ ಬಡವರ ನರನಾಡಿಗಳಲಿ                        
ಮಾನವನ ಜೀವನಕ್ಕೆ                                      ಅವಶ್ಯವಾಗಿರಬೇಕು ಕಾಂಚನ
 ಹಣ ಇಲ್ಲದೆ ಆಗುವುದು ಅವನ ಬಾಳು ಹರಣ
                                                                      ಜೀವನ ಎಂಬ ಮಂತ್ರ ಅಡಗಿದೆ  ಹಣದಲ್ಲಿ                                                                       
                                                                              ಅದನ್ನು ನಡಿಸಿಕೊಂಡು ಹೋಗುವ ತಂತ್ರ ನಮ್ಮಲಿರಲಿ||
 
ಸೌಮ್ಯ ಜೋಷಿ,
ಇಂಜಿನಿಯರಿಂಗ್ ವಿದ್ಯಾರ್ಥಿನಿ,
ಎಸ್.ಎಲ್.ಏನ್. ಕಾಲೇಜು ,
ರಾಯಚೂರು
                                                                                                  ಕವಯತ್ರಿ

Friday, December 19, 2014

ಕನಸುಗಳ ಬೆನ್ನೆಟ್ಟುವ ಸೆಲೆಗೆ “ಡಿ2ಡಿ”

       ಕಲಿಕೆ ಜೀವನ ಪರ್ಯಂತ ಸಾಗುವ ದಿಗಂತದ ಹೊಂಗಿರಣ. ಇದರಲ್ಲಿ ಸಾರ್ಥಕತೆ ಮರಳುಗಾಡಿನಲ್ಲಿ ಜೀವಾಮ್ರತವ ಹುಡುಕುವ ಪರಿ, ಅನೇಕ ಸೋಲು,ಗೆಲುವಿನ ಹೆಜ್ಜೆಯೇ ಗಮ್ಯದೆಡೆಗಿನ ರೋಮಾಂಚನಕಾರಿ ಪಯಣಕ್ಕೆ ಪಡಿನೆರಳಿನ     ಹಾಸುಗಲ್ಲಾಗಿ, ವಿಜಯೀ ಪತಾಕೆಯ ಗಗನಚುಂಬಿಸಿ ಅನಾವರಣಗೊಳಿಸುತ್ತದೆ. ಆ ಇಮ್ಮಡಿಗೆ ಸ್ಪೂರ್ತಿ ಮರದಲ್ಲಿ ನಾನಾ  ರೆಂಬೆ-ಕೊಂಬೆಗಳಂತೆ, ಹೆಸರಿಗೆ ನೂರರ ಪಂಕ್ತಿ, ಈ ಹತ್ತರಲ್ಲೊಂದು ಕನಸು ಕಾಣುತ್ತ, ನನಸಿನ ಹಾದಿಗೆ ಮಾನವೀಯ ಸೆಲೆಯ ಸ್ಪರ್ಶಿಸುತ್ತಾ ಅರಳುತ್ತಿರುವ ನಂದಕುಸುಮವೇ “ಡಿ2ಡಿ”.
     
        ಹೆಸರಿಗೆ ಬೆಲ್ಲದಂತೆ ಅಚ್ಚುಕಟ್ಟಾದರು, ಸೊಗಸು ಅದರ ಸವಿಗೆ ಸಮಾನ. ಕನಸುಗಳನ್ನೇ ಬೆನ್ನೆಟ್ಟುವ ಸೆಲೆಯಿಂದ ಜನಸಾಮಾನ್ಯರ ಮಧ್ಯದಲ್ಲಿ ಅರಳಿದ ಹೂವು “ಡಿ2ಡಿ”, ಅಂದರೆ “ಡೆರ್ ಟು ಡ್ರೀಮ್”. ಬೆಂಗಳೂರಿನಲ್ಲಿ ಇತ್ತಿಚಿಗೆ ತಲೆಯೆತ್ತಿ ಸಾಧನೆಯ ಶಿಖರದಲ್ಲಿ ಮೆರೆಯುತ್ತಿರುವ ಹಸಿಗೂಸಿನ ಜನಕ ಶ್ರೀಯುತ ರಾಘವೇಂದ್ರ ಎನ್, ಇಂಜಿನಿಯರಿಂಗ್ ಪದವಿದರರಾದ ಇವರು ಸಾಫ್ಟ್ವೇರ್
ಕಂಪನಿಯ ಉದ್ಯೋಗದ ಅವಲಂಬನೆಯ ಸದಾವಕಾಶ ಮಡಚಿಟ್ಟು ಕನಸಿನ ಕೂಸನ್ನು ನನಸಿನ ಪಯಣಕ್ಕೆ  ಮಣೆ ಹಾಕಿದ ಆಶಾವಾದಿ. ಬೇರೆಯವರ ಕನಸಿಗೆ, ಗಮ್ಯದ ಸುಳಿವನ್ನು  ನೀಡುತ್ತಾ  ಸಾಲು ಸಾಲು ಮಾನವ ಗೋಪುರವ ಉತ್ತುಂಗಕ್ಕೆ ಏರಿಸಿದ ಹೆಗ್ಗಳಿಕೆ ಇವರದು.

    
         ಹೆಮ್ಮೆಯ ಮಾತುಗಾರ,  ಕನಸುಗಳ ಮೂಟೆ ಹೊತ್ತ ತರಬೇತುದಾರ, ಸದಾ ನಗುಮೊಗದ ಮಾನವೀಯತೆಯ ಚಿಲುಮೆ, ನಿನ್ನೆಯ ಕನಸುಗಳ ಮೇಲೆ, ನಾಳಿನ ನನಸುಗಳ ಬುನಾದಿಯ ಮೆಟ್ಟಿಲು ಕಟ್ಟಿಸುವ ಅಸಮಾನ್ಯ ಶಿಲ್ಪಿ ಶ್ರೀಯುತ ರಾಘವೇಂದ್ರ ಎನ್,  ಅವರು ತಮ್ಮ ಜೀವನದ 40ನೇ ಅಧ್ಯಾಯಕ್ಕೆ ಕಾಲಿಟ್ಟ ಈ ಶುಭ ಸಂದರ್ಭದಲ್ಲಿ  ಜನುಮ ದಿನದ ಹಾರ್ದಿಕ ಶುಭ ಕಾಮನೆಗಳು...

Wednesday, December 3, 2014

ಸೇವಾಸಮಾಜಕ್ಕೆ ಪಾದಾರ್ಪಣೆಗೈದ “ರೆಮೋಸ್-ಚಿಕ್ಕಮಗಳೂರು” ವಿದ್ಯಾರ್ಥಿಗಳ ಬಳಗ


     ಕಲಿಕೆಯ ಜೊತೆ ಸೇವೆಯನ್ನು 
ಗುರಿಯಾಗಿಸಿಕೊಂಡು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ತೊಂದರೆಗೆ ಸ್ಪಂದಿಸುವ ನಿಟ್ಟಿನಲ್ಲಿ ಇನ್ನು ಹಲವಾರು ಆಕಾಂಕ್ಷೆ ಮತ್ತು ಯೋಜನೆಗಳನ್ನು ಹೊತ್ತು  ಬೆಳಕಿಗೆ ಬಂದ ಚಿಕ್ಕಮಗಳೂರಿನ   ಇಂಜಿನಿಯರಿಂಗ್ ವಿದ್ಯಾರ್ಥಿಗಳ ಏಕರೂಪಿ ಬಳಗ, ಈ “ರೆಮೋಸ್-ಚಿಕ್ಕಮಗಳೂರು”.

      ದಿನಾಂಕ ೨೦-೧೧-೨೦೧೪ರಂದು “ರೆಮೋಸ್-ಚಿಕ್ಕಮಗಳೂರು” ಬಳಗದ ೧೪ ಮಂದಿ ವಿದ್ಯಾರ್ಥಿಗಳು ಕಡೂರಿನ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು ಹಾಗು ಬೀರೂರಿನ ಕೆ.ಎಲ್.ಕೆ. ಸರ್ಕಾರಿ ಪ.ಪೂ. ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳಿಗೆ  ೧೨೫ಕ್ಕು ಹೆಚ್ಚು ಸಿಇಟಿ ಪಠ್ಯ-ಪುಸ್ತಕಗಳು ಹಾಗು ಇತರೆ ಓದುವ ಪರಿಕರಗಳನ್ನು ಉಚಿತವಾಗಿ ನೀಡಿ, ವಿದ್ಯಾರ್ಥಿಗಳ ಮುಂದಿನ ಪಬ್ಲಿಕ್ ಪರೀಕ್ಷೆ ಹಾಗೂ ಸಿಇಟಿಗೆ ತಯಾರಾಗುವ ಬಗೆ, ಭವಿಷ್ಯದಲ್ಲಿ ಲಭ್ಯವಿರುವ ಕೋರ್ಸ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಹಾಗೂ ತದನಂತರದ ಸಂವಹನ 
ಕಾರ್ಯಗಾರದಲ್ಲಿ ವಿದ್ಯಾರ್ಥಿಗಳಲ್ಲಿನ ಸಾಕಷ್ಟು ಪ್ರಶ್ನೆಗೆ ಉತ್ತರ ಕೊಟ್ಟು, ಕಾಲೇಜಿನ ಪ್ರಾಚಾರ್ಯರರ, ಇತರೆ ಶಿಕ್ಷಕರ ಹೆಗ್ಗಳಿಕೆಗಳಸಿಕೊಂಡು ಸೇವಾಸಮಾಜಕ್ಕೆ ಪಾದಾರ್ಪಣೆಗೈದ “ರೆಮೋಸ್-ಚಿಕ್ಕಮಗಳೂರು”ನ ಮೊದಲ ಗುರುತಿನ ಹೆಜ್ಜೆ.


Thursday, September 18, 2014

ಅಂಬೆಗಾಲಿನ ಮಾತು...


             ಬಹಳ ಯೋಚನೆ ಹಂದರದಲ್ಲೂ, ಅವಸರದಿಂದ  ಅಂತರಜಾಲದಲ್ಲಿ ನಗಾರಿಯ ಡಿಂಡಿಮವ ಬಾರಿಸಿದೆ. ಅಂಬೆಗಾಲು ಇಡುವ ಈ ಕೂಸಿಗೆ ತೊದಲು ನುಡಿಯ "ಅಮ್ಮ"ಎಂಬ ನುಡಿಯ ಹೊರತು ಬೇರೆ ಮಾತಿಗೆ ನಾಲಿಗೆ ಆಡದು. ಮನದಾಳದ ಮೂರ್ತ ಬಾವನೆಗೆ, ತಲೆಗೆ ಹೊಳೆದ ಅಕ್ಷರಪುಂಜಕ್ಕೆ, ಕೈ ಗಿಚಿದೆಡೆ ಬರೆದು ಪ್ರಕಟಿಸುವ ವ್ಯಾಕ್ಯಾನಕ್ಕೆ ಈ ನಗಾರಿಯ ವೇದಿಕೆ ಸಜ್ಜುಗೊಳಿಸಿ ಅನಾವರಣಗೊಲಿಸಿದ್ದೇನೆ.

       ಸಹೃದಯೀ ಓದುಗರ ಆಶೀರ್ವಾದದ ಫಲದಿಂದ "ನಗಾರಿ" ಬ್ಲಾಗ್ ತನ್ನ 1000+ ವೀಕ್ಷಕರ ವೀಕ್ಷಣೆಯ ಮೈಲಿಗಲ್ಲಿಗೆ ಪಾದಾರ್ಪಣೆಗೈದು ಅಂಬೆಗಾಲಿನ ತೊದಲು ಚೆಷ್ಟೇಗೆ ಆಹ್ವಾನ ನೀಡಿದ ತಮಗೆಲ್ಲರಿಗೂ ನನ್ನ  ಬರಹದ ಕಪಿ(ಕವಿ)ಚೆಷ್ಟೇಯ ಬೆಂಬಲಿಸಿ, ಪ್ರೋತ್ಸಾಯಿಸಿದ ನಿಮಗೆಲ್ಲರಿಗೂ ನಗಾರಿಯ ಶ್ರುತಿಗಾರನಿಂದ ಕೃತಜ್ಞತೆಯ ಅಭಾರಿ...
 
           ತೊದಲು ನುಡಿಯುತ್ತ, ಅಂಬೆಗಾಲಿಟ್ಟ ಕಪಿಚೆಷ್ಟೇಗಳ ಸಂಕ್ಷಿಪ್ತ ನೋಟ..